ಕಾದಿಟ್ಟ ಸೈನ್ಯ

ಪೌರವೃತ್ತಿಯಲ್ಲಿರುವ ಅಸೈನಿಕ ನಾಗರಿಕರಿಗೆ ಶಾಂತಿ ಕಾಲದಲ್ಲಿ ಯುಕ್ತ ಸೈನಿಕ ಶಿಕ್ಷಣ ನೀಡಿ ಅವರನ್ನು ಸ್ವಾಧೀನದಲ್ಲಿಟ್ಟುಕೊಂಡು ಸಮರ ಕಾಲದಲ್ಲಿ ಕರೆಯಿಸಿಕೊಳ್ಳುವ ವ್ಯವಸ್ಥೆ (ರಿಸóóóರ್ವ್). ಕ್ರಮವಾದ ಸೈನ್ಯಗಳಿಂದ ಬೇರೆಯಾದ ಕೈಗಾವಲುಪಡೆ ಇದು. ಈ ದಳದವರಿಗೆ ಯುದ್ಧಕಾರ್ಯದ ಹೊಣೆಗಾರಿಕೆ ಯುದ್ಧವೊದಗಿದಾಗ ಮಾತ್ರ; ಉಳಿದ ಕಾಲದಲ್ಲಿಲ್ಲ. ದೇಶರಕ್ಷಣೆಗೆ ಯುದ್ಧಸಮಯದಲ್ಲಿ ಶಾಂತಿಕಾಲಕ್ಕಿಂತಲೂ ಬಹಳ ಹೆಚ್ಚು ಸೇನೆಗಳು ಅಗತ್ಯ. ಇಡೀ ಸಮರಸೈನ್ಯಕ್ಕೆ ವಿಪರೀತ ಖರ್ಚಾಗುವುದರಿಂದ ಅದಷ್ಟನ್ನೂ ಶಾಂತಿಕಾಲದಲ್ಲಿಟ್ಟುಕೊಳ್ಳುವುದು ಅಸಾಧ್ಯ. ಯುದ್ಧವೊದಗಿದಾಗ ಜರೂರಿಗಾಗಿ ಸೈನ್ಯವನ್ನು ಹೆಚ್ಚಿಸಲು ತಕ್ಕ ತರಬೇತಿಯಿಲ್ಲದ ಹೊಸಬರನ್ನು ಸೇರಿಸಿಕೊಂಡರೆ ಹಲವಾರು ಅವ್ಯವಸ್ಥೆಗಳಾಗುವುವು. ಆದ್ದರಿಂದ ಕಾದಿಟ್ಟ ಸೈನ್ಯದ ಉಪಯುಕ್ತತೆ ಸ್ಪಷ್ಟವಾಗಿದೆ.

 ಸಮರಸಜ್ಜಿತ ಸೈನ್ಯಗಳಲ್ಲಿ ಭೂಸೇನೆ, ನೌಕಾದಳ, ವಾಯುಪಡೆಗಳೆಂಬ ಮೂರು ಪ್ರತ್ಯೇಕ ಅಂಗಗಳಿರುವುದರಿಂದ ಅವುಗಳಿಗೆ ತಕ್ಕಂತೆ ಮೂರು ಬೇರೆ ಬೇರೆ ಕಾದಿಟ್ಟ ಶಾಖೆಗಳಿವೆ ; ಪ್ರತ್ಯೇಕ ನಮೂನೆಗಳ ಉಡುಪುಗಳಿವೆ. ಅವಕ್ಕೆ ಶಾಂತಿಕಾಲದಲ್ಲಿ ಮುಂಗೊತ್ತಿನ ರುಸುಮು (ರೀಟೇನಿಂಗ್ ಫೀ), ಶಿಕ್ಷಣ ಮತ್ತು ಯುದ್ಧಕಾಲಗಳಲ್ಲಿ ಪೂರ್ತಿ ಸಂಬಳ, ಭತ್ಯ ಪಡೆಯುತ್ತವೆ. ಸೇವಾವಧಿ, ಶಿಕ್ಷಣವಿಧಾನ, ಕಾರ್ಯಕ್ರಮಗಳು ಮುಂತಾದುವು ಒಂದೊಂದು ರಾಷ್ಟ್ರದಲ್ಲಿ ಒಂದೊಂದು ವಿಧ. ಉದಾಹರಣೆಗೆ ಡಾಮಿನಿಕನ್ ಗಣರಾಜ್ಯ ಮತ್ತು ಭಾರತದಲ್ಲಿ ಕಾದಿಟ್ಟ ಸೈನ್ಯದ ಸದಸ್ಯತ್ವ ಐಚ್ಛಿಕ. 

ಕಾದಿಟ್ಟ ಫೌಜಿನಲ್ಲಿ ಕಮಿಷನ್ಡ್ ಮತ್ತು ನಾನ್ ಕಮಿಷನ್ಡ್ ಅಧಿಕಾರಿಗಳು, ಸೈನಿಕರು ಎಂಬ ಎರಡು ವರ್ಗಗಳಿವೆ. ಅವೆರಡಕ್ಕೂ ಯುಕ್ತ ವಿದ್ಯಾರ್ಹತೆ ಮತ್ತು ಇತರ ಯೋಗ್ಯತೆಗಳಿರುವ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿ ಆಯುತ್ತದೆ. ಕ್ರಮವಾದ ಸೇನೆಯಿಂದ ನಿವೃತ್ತರಾಗಿ ವಿಶ್ರಾಂತಿವೇತನ ಪಡೆದ ಅಧಿಕಾರಿಗಳೂ ಅಲ್ಪಾವಧಿ ಕಮಿಷನಿನಲ್ಲಿ ಐದು ವರ್ಷ ಉದ್ಯೋಗಮಾಡಿದರೂ ಸೈನ್ಯಕ್ಕೆ ಮೀಸಲಾಗಿರಲು ಅವಕಾಶವಿದೆ. ಅಮೆರಿಕದ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ರಿಸóರ್ವ್ ಆಫೀಸರ್ ಟ್ರೇನಿಂಗ್ ಕೋರ್ ಎಂಬ ಶಿಕ್ಷಣದಲ್ಲಿ ಪದವೀಧರರಾದವರು ಅಧಿಕಾರಿಗಳಾಗಬಹುದು. 

 ಬೇರೆ ಬೇರೆ ಕಸಬುಗಳಿಗೆ ಆಯ್ಕೆಯಾದ ಅಧಿಕಾರಿಗಳಿಗೂ ಸೈನಿಕರಿಗೂ ಭಾರತದಲ್ಲಿ ಬೇರೆ ಬೇರೆ ಊರುಗಳಲ್ಲಿ ತರಬೇತಿ ಕೇಂದ್ರಗಳಿವೆ : ಎಲೆಕ್ಟ್ರಿಕ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗಿಗೆ ಸಿಕಂದರಾಬಾದ್; ರೀಮೌಂಟ್ ಮತ್ತು ಪಶುವೈದ್ಯಕ್ಕೆ ಮೀರತ್ ; ಸೇನೆಯ ಪೋಲೀಸಿಗೆ ಫೈeóÁಬಾದ್ ; ಸುದ್ದಿಗಾರರಿಗೆ ಪುಣೆ; ಪಯನೀರ್ ಪಟಾಲಂಗೆ ನೈನಿತಾಲ್ ; ವಾಸ್ತುಕಲೆಗೆ (ಸ್ಯಾಪರ್ಸ್ ಅಂಡ್ ಮೈನರ್ಸ್) ರೂರ್ಕಿ ಮತ್ತು ಕರ್ಕಿ ; ಕೃಷಿಕಸಬಿಗೆ ಮೀರತ್; ಪ್ರೌಢ ವೈದ್ಯಕ್ಕೆ ಪುಣೆ ಇವಲ್ಲದೆ ಸೈನಿಕ ಸರ್ವೆ, ಸಿಗ್ನಲ್, ಗೋಲಂದಾಜು ಇಲಾಖೆ, ಫಿರಂಗಿ ಮತ್ತು ಯುದ್ಧೋಪಕರಣಗಳ ಖಾತೆ, ಸಾಗಣೆ ಪಟಾಲಂ ಮುಂತಾದುವುಗಳಿಗೂ ಶಿಕ್ಷಣ ಕೇಂದ್ರಗಳಿವೆ. ಶಿಕ್ಷಣ ಕಾಲವನ್ನು ಕಾದಿಟ್ಟವರ ಅನುಕೂಲ, ಕೃಷಿಕಾಲ, ಪೌರ ಉದ್ಯೋಗಗಳಿಗೆ ಅಡಚಣೆಯಾಗದಂತೆ ಏರ್ಪಡಿಸಿದೆ. ಕೆಲವು ವಿಶಿಷ್ಟ ಕಲಾವೃತ್ತಿಗಳನ್ನು ಉದ್ಯೋಗಿಗಳು ತಾವಿರುವ ಪೌರ ಇಲಾಖೆಗಳಲ್ಲೇ ತೃಪ್ತಿಕರವಾಗಿ ಮಾಡುತ್ತಿದ್ದಾರೆಂದು ಅವರ ಮೇಲಿನವರು ಪ್ರತಿವರ್ಷವೂ ಯೋಗ್ಯತಾಪತ್ರವನ್ನು ಕಳುಹಿಸಿದರೆ ಅಂಥವರನ್ನು ಸೈನಿಕ ಕೇಂದ್ರ ಶಿಕ್ಷಣದಿಂದ ಮುಕ್ತಮಾಡಲಾಗುತ್ತದೆ. ಎಲ್ಲರಿಗೂ ಪ್ರತಿವರ್ಷವೂ ಒಂದು ತಿಂಗಳ ಶಿಬಿರ ಶಿಕ್ಷಣ ಕಡ್ಡಾಯ. ಈ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಮಾಡಲು ಸೌಕರ್ಯಗಳಿವೆ. 

 ಕಾದಿಟ್ಟ ಸಮುದ್ರಸೇನೆಯವರಲ್ಲಿ ಎರಡು ವಿಧದವರಿದ್ದಾರೆ: ಸಮುದ್ರ ಜೀವನವೇ ಕಸುಬಾಗಿರುವವರು ಮತ್ತು ಸಮುದ್ರವೃತ್ತಿಯಿಲ್ಲದಿದ್ದರೂ ನೌಕಾವಿಹಾರಿಗಳಾಗಿ ಸಮುದ್ರ ಮತ್ತು ನೌಕೆಗೆ ಸಂಬಂಧಪಟ್ಟ ಕ್ರೀಡಾನೌಕೆ ಅಥವಾ ಅಂಥ ಉದ್ಯೋಗಗಳಲ್ಲಿ ತೀವ್ರ ಅಭಿರುಚಿಯುಳ್ಳವರು. ಎರಡನೆಯ ವರ್ಗಕ್ಕೆ ಭಾರತದ ಕಾದಿಟ್ಟ ಸ್ವಯಂಸೇವಕ ನೌಕಾಬಲ (ನೇವಲ್ ವಾಲ್ಯುಂಟಿಯರ್ ರಿಸóರ್ವ್) ಎಂದು ಹೆಸರು. ನಾವಿಕರ ಹಡಗುಪಡೆಗಳ ಉದ್ಯೋಗಸ್ಥರಿಗೆ ನೌಕಾಬಲದ ಮೀಸಲು ಹುದ್ದೇದಾರರೆಂದು (ಫ್ಲೀಟ್ ರಿಸóರ್ವಿಸ್ಟ್ಸ್) ಹೆಸರು. ಹತ್ತು ವರ್ಷಕಾಲ ನಾವಿಕೋದ್ಯೋಗದಲ್ಲಿದ್ದವರನ್ನು ಈ ಕಾದಿಟ್ಟ ದಳಕ್ಕೆ ಹತ್ತು ವರ್ಷಗಳ ವರೆಗೆ ವರ್ಗಾಯಿಸುತ್ತಾರೆ. ನೌಕಾಶಿಲ್ಪಶಾಸ್ತ್ರದಲ್ಲಿ ಪದವೀಧರರಾಗಿ ಹಡಗು ನಿರ್ಮಾಣದಲ್ಲಿ ಅನುಭವವಿರುವವರು ನೌಕಾ ಎಂಜಿನಿಯರಾಗಲು ಸಾಧ್ಯ. ಅವರಿಗೆ ಹಡಗುಕಟ್ಟೆಗಳಲ್ಲಿ ಶಿಕ್ಷಣ ದೊರೆಯುವ ವ್ಯವಸ್ಥೆಯಿದೆ. 

 ಅಮೆರಿಕದ ಕಾದಿಟ್ಟ ನೌಕಾದಳದಲ್ಲಿ ಮೂರು ಬಗೆಗಳಿವೆ : ಬೇಕಾದಾಗ ತತ್‍ಕ್ಷಣ ಸಿಕ್ಕುವಂತಿರುವ ಸೇನೆ, ಕೈಗಾವಲಾಗಿರುವ ಸೇನೆ ಮತ್ತು ನಾವಿಕೋದ್ಯೋಗದಿಂದ ವಿಶ್ರಾಂತಿ ಪಡೆದು ಯುದ್ಧವೊದಗಿದಾಗ ಕರೆಯಿಸಿಕೊಳ್ಳಬಹುದಾದ ನೌಕಾಪಡೆಯ ಮೀಸಲು ಅಧಿಕಾರಿಗಳು. ಮೊದಲನೆಯ ವರ್ಗ ಯುದ್ಧ, ರಾಷ್ಟ್ರೀಯ ಅನಾಹುತ, ಭೂಕಂಪ ಪ್ರವಾಹಗಳಂಥ ನೈಸರ್ಗಿಕ ಪ್ರಮಾದಗಳಾದಾಗ ಆಜ್ಞೆ ಬಂದೊಡನೆ ಹೋಗಲು ಸನ್ನದ್ಧವಾಗಿರಬೇಕು. ಎರಡನೆಯದಕ್ಕೆ ಯುದ್ಧಕಾಲದಲ್ಲಿ ಮಾತ್ರ ಹಾಜರಾಗುವ ಹೊಣೆಗಾರಿಕೆ. ದ್ವಿತೀಯ ಜಾಗತಿಕ ಮಹಾಯುದ್ಧದಲ್ಲಿ ಅಮೆರಿಕದ ಕಾದಿಟ್ಟ ನೌಕಾಬಲದಲ್ಲಿ ಮೂರು ಲಕ್ಷ ಅಧಿಕಾರಿಗಳೂ 25 ಲಕ್ಷ ಇತರ ಉದ್ಯೋಗಸ್ಥರೂ ಇದ್ದರು. 

ವಾಯುಪಡೆಯ ಕಾದಿಟ್ಟ ದಳಗಳಲ್ಲಿ ಮೂರು ಬಗೆಗಳಿವೆ : ವಾಯುಸೈನ್ಯದಲ್ಲಿ ಉದ್ಯೋಗಮಾಡಿ ಬಿಡುಗಡೆ ಅಥವಾ ವಿಶ್ರಾಂತಿಪಡೆದ ಮೀಸಲು ಅಧಿಕಾರಿಗಳು ; ವೈಮಾನಿಕ ಕಲೆಯಲ್ಲಿ ತರಬೇತಿ ಪಡೆದು ವಾಯುರಕ್ಷಣೆಗೆ ಮೀಸಲಾದ ವಿಮಾನ ತಂತ್ರಜ್ಞರು ಮತ್ತು ವಿಮಾನಗಾಮಿಗಳು; ಮತ್ತು ಸಹಾಯಕ ವಾಯು ಸೈನ್ಯದವರು. ಈ ಸೇನಾಂಗದ ನಾನಾವೃತ್ತಿಗಳಿಗೆಲ್ಲ ಶಿಕ್ಷಣಕೇಂದ್ರಗಳಿವೆ.          

(ಎಂ.ಜಿ.ಕೆ.ಎಂ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ